ಜೆರ್ಬೋವಾ ಇಲಿ
	ಆಫ್ರಿಕ, ಏಷ್ಯ ಮತ್ತು ಪೂರ್ವ ಯೂರೋಪುಗಳಲ್ಲಿ ಕಂಡುಬರುವ ವಿಚಿತ್ರ ಬಗೆಯ ಪ್ರಾಣಿ. ಇದಕ್ಕೆ ಜಿಗಿಯುವ ಇಲಿ ಎಂಬ ಇನ್ನೊಂದು ಹೆಸರೂ ಉಂಟು. ರಾಡೆನ್‍ಷಿಯ ಗಣ, ಸಿಂಪ್ಲಿಸಿಡೆಂಟೇಟ ಉಪ ಗಣ, ಮಯೊಮಾರ್ಫ ವಿಭಾಗದ ಡ್ಯಪೋಡಿಡೀ ಕುಟುಂಬಕ್ಕೆ ಸೇರಿದೆ. ಇದರ ವೈe್ಞÁನಿಕ ಹೆಸರು ಡೈಪಸ್ ಎಂಬದು. ಈ ಕುಟುಂಬಕ್ಕೆ ಸೇರಿದ ಇನ್ನಿತರ ಜಾತಿಗಳಿಗೂ ಜೆರ್ಬೋವ ಎಂಬ ಸಾಮಾನ್ಯ ಹೆಸರೇ ಉಂಟು. ಡೈಪಸ್ ಜಾತಿಯಲ್ಲಿ ಹತ್ತು ಪ್ರಭೇದಗಳಿವೆ. ಮರುಭೂಮಿಯ ಕುರುಚಲು ಪ್ರದೇಶಗಳಲ್ಲಿ ಮಾತ್ರ ಇದು ವಾಸಿಸುತ್ತದೆ. ಇದು ಪುಟ್ಟ ಗಾತ್ರದ ಪ್ರಾಣಿ. ದೇಹದ ಉದ್ದ ಸುಮರು 18ಛಿm. ದೇಹಕ್ಕಿಂತ ಉದ್ದವಾದ, ಅಂದರೆ ಸುಮಾರು 20.5ಛಿm. ಉದ್ದವಾದ, ಬಾಲ ಉಂಟು. ಬಾಲದ ತುದಿ ಕುಚ್ಚಿನಂತಿದೆ. ಬಾಲದ ಮೇಲೆ ಬಿಳಿ ಮತ್ತು ಕಪ್ಪು ಬಣ್ಣದ ಪಟ್ಟೆಗಳಿವೆ. ದೇಹದ ಮೇಲೆ ಕಂದು ಬಣ್ಣದ ಕೂದಲಿನ ಹೊದಿಕೆಯುಂಟು. ಉದರ ಭಾಗ ಬಿಳಿ. ಜೆರ್ಬೋವದ ವಿಚಿತ್ರ ಲಕ್ಷಣವೆಂದರೆ ಮುಂಗಾಲುಗಳು ಚಿಕ್ಕವಾಗಿದ್ದು, ಹಿಂಗಾಲುಗಳು ಮಾತ್ರ ಬಹಳ ಉದ್ದವಾಗಿರುವುದು. ಇದರಿಂದ ಇದು ಕಾಂಗರೂವಿನಂತೆ ಕಾಣುತ್ತದೆ. ಈ ಕಾರಣದಿಂದ ಅಮೆರಿಕದಲ್ಲಿ ಇದನ್ನು 'ಕಾಂಗರೂ ಇಲಿ ಎಂದು ಕರೆಯುತ್ತಾರೆ. ಪಾದದ ಮೂಳೆಗಳು ಕೂಡ ಬಹಳ ಉದ್ದವಾಗಿದ್ದು ಒಂದಕ್ಕೊಂದು ಕೂಡಿ ಕೊಂಡಿವೆ. ಹಿಂಗಾಲಿನಲ್ಲಿ ಮೂರು ಬೆರಳುಗಳುಂಟು. ಕತ್ತಿನ ಕಶೇರುಗಳು ಕೂಡಿಕೊಂಡಿರುವುದು ಇದರ ಮತ್ತೊಂದು ಸೋಜಿಗದ ಲಕ್ಷಣ. ಇಂಥ ದೇಹದ ರಚನಾ ವಿನ್ಯಾಸದಿಂದಾಗಿ ಜೆರ್ಬೋವ ದೂರದೂರಕ್ಕೆ ನೆಗೆಯುವ ಶಕ್ತಿಯನ್ನು ಪಡೆದಿದೆ. ಒಂದು ನೆಗೆತಕ್ಕೆ 3'-4' ದೂರವನ್ನು ಕ್ರಮಿಸಬಲ್ಲದು. ಜಿಗಿಯುತ್ತಿರುವಾಗ ಬಾಲವನ್ನು ನೀಳವಾಗಿ ನೀಡುವುದರ ಮೂಲಕ ದೇಹದ ಸಮತೋಲನೆಯನ್ನು ಕಾಪಾಡಿಕೊಳ್ಳುತ್ತದೆ. ಕಾಲುಗಳ ಕೆಲಭಾಗದಲ್ಲಿ ಕೂದಲಿನ ಜೊಂಪೆಗಳಿವೆ. ಕಿವಿಗಳು ಅಗಲ, ಮೂತಿ ಇಲಿಯದರಷ್ಟು ಉದ್ದವಲ್ಲ. ಇದೆ ಬಾಚಿಹಲ್ಲುಗಳು ಬಹಳ ಉದ್ದವೂ ಶಕ್ತಿಯುತವೂ ಆಗಿವೆ. ಇದರಿಂದ ಇದು ಭೂಮಿಯಲ್ಲಿ ಬಿಲಗಳನ್ನು ಕೊರೆಯಬಲ್ಲುದು. ಜೆರ್ಬೋವದ ಬಣ್ಣ ಸುತ್ತಲ ಮರಳಿನ ಬಣ್ಣವನ್ನೇ ಹೋಲುವುದರಿಂದ ಇದು ಶತ್ರುಗಳ ಕಣ್ಣಿಗೆ ಬೇಗನೆ ಗೋಚರಿಸುವುದಿಲ್ಲ. ಅರಬರು ಇದರ ಮಾಂಸವನ್ನು ತಿನ್ನುತ್ತಾರೆ. ಇದರಿಂದ ಕೆಲವೊಮ್ಮೆ ಇದನ್ನು ಇಸ್ರೇಲಿನ 'ಕುರಿ' ಎಂದು ಕರೆಯುವುದುಂಟು. ಬೆಳಗಿನ ಹೊತ್ತಿನಲ್ಲಿ ಬಿಲದಲ್ಲಿ ವಿಶ್ರಮಿಸುತ್ತಿದ್ದು ರಾತ್ರಿಯ ವೇಳೆಯಲ್ಲಿ ಮಾತ್ರ ತನ್ನ ಆಹಾರದ ಬೇಟೆಗಾಗಿ ಹೊರಬರುತ್ತದೆ. ಹೂ ಮತ್ತು ಬೀಜಗಳೇ ಇದರ ಮೆಚ್ಚಿನ ಆಹಾರ. ಜೆರ್ಬೋವ ನೀರು ಕುಡಿಯದೇ ಬಹಳ ದಿವಸ ಜೀವಿಸಬಲ್ಲದು. ವಸಂತಖುತು ಮತ್ತು ಬೇಸಿಗೆ ಕಾಲದಲ್ಲಿ ಎರಡರಿಂದ ನಾಲ್ಕು ಮರಿಗಳಿಗೆ ಜನ್ಮ ಕೊಡುತ್ತದೆ. ಹಾವು, ಗೂಬೆ ಮತ್ತು ಮರಳುನಾಡಿನ ನರಿಗಳಿಗೆ ಇದು ಮುಖ್ಯ ಆಹಾರವೆನಿಸಿದೆ.
(ಎಂ.ಎನ್.ಎಚ್.ಇ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ